ಮಾಜಿ ಸಚಿವ ಆಂಜನೇಯ ಅವಿವೇಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ಯಾಕೆ?
ಎಚ್ ಆಂಜನೇಯ ಅವಿವೇಕಿ, ಸಿದ್ದರಾಮಯ್ಯನವರನ್ನೇ ಪೂಜಿಸಲಿ: ಯತ್ನಾಳ್ ಹೀಗೆ ಹೇಳಿದ್ಯಾಕೆ ?
ಬೆಂಗಳೂರು, ಜನವರಿ 02: ಭಗವಾನ್ ರಾಮನನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೋಲಿಸಿ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್ ಆಂಜನೇಯ ಅವಿವೇಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಇಂತಹ ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದ ಸಚಿವಾರಿಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ !!! ಆಂಜನೇಯಪ್ಪ ನವರ ಪೂಜ್ಯ ದೇವರಾದ ಸಿದ್ದರಾಮಯ್ಯ ನವರಿಗೆ ಅವರ ಮನೆಯಲ್ಲಿ ಸಕಲ ರೀತಿಯಲ್ಲಿ ಪೂಜಾ ಕೈಂ-ಕಾರ್ಯಗಳು ನಡೆಯಲಿ. ಹಿಂದೂಗಳ ಆರಾಧ್ಯ ದೈವ ಶ್ರೀ ರಾಮ ದೇವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ… pic.twitter.com/ICsNlxhQ1S
— Basanagouda R Patil (Yatnal) (@BasanagoudaBJP) January 1, 2024
ಇಂತಹ ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದ ಸಚಿವಾರಿಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ. ಆಂಜನೇಯ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪೂಜಾ ಕೈಂಕರ್ಯ ನೆರವೇರಿಸಲಿ. ಹಿಂದೂಗಳ ಆರಾಧ್ಯ ದೈವ ಶ್ರೀ ರಾಮ ದೇವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಘನತೆಯಿಂದ, ಗೌರವದಿಂದ ವರ್ತಿಸಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಕುರಿತು ಹೆಚ್ ಆಂಜನೇಯ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರೇ ಒಬ್ಬ ರಾಮ, ಇನ್ನು ಅವರು ಆ ರಾಮನನ್ನು (ಅಯೋಧ್ಯೆಯ ರಾಮನ ಉದ್ದೇಶಿಸಿ) ಹೋಗಿ ಯಾಕೆ ಪೂಜಿಸಬೇಕು ಎಂದು ಪ್ರಶ್ನಿಸಿದ್ದರು.
1992 ರಲ್ಲಿ ಕರಸೇವಕರಾಗಿ ಶ್ರೀ ರಾಮ ದೇವರ ಸೇವೆ ಮಾಡಿದ ಭಕ್ತರಿಗೆ, ಕಾರ್ಯಕರ್ತರಿಗೆ ಈಗ ನೋಟೀಸ್ ನೀಡಿ ಹುಬ್ಬಳ್ಳಿ ಪೊಲೀಸರು ಬಂಧನ ಮಾಡುವುದಾಗಿ ಬೆದರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಸೇಡಿನ ರಾಜಕಾರಣ ತೋರಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರನ್ನು ವಿ.ಐ.ಪಿ ಪ್ರಕರಣಗಳ ಹುಡುಕಾಟಕ್ಕೆ ನಿಯೋಜಿಸಿರುವ ಗೃಹ ಇಲಾಖೆಯ ಕ್ರಮ ಖಂಡನೀಯ.
ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರ 31 ವರ್ಷಗಳ ಹಳೆಯ ಪ್ರಕರಣಕ್ಕೆ ಜೀವ ನೀಡುವ ಮೂಲಕ ತಾನು ಹಿಂದೂ ವಿರೋಧಿ ಎಂದು ಸಾಬೀತುಪಡಿಸಿದೆ. ಅಸಲೀಗೆ, ಮೂರು ದಶಕಗಳ ಕಾಲ ಸುಮ್ಮನಿದ್ದು, ಈಗ ರಾಮ ಜನ್ಮಭೂಮಿ ಪ್ರಾಣಪ್ರತಿಷ್ಠಾಪನೆಯ ದಿನಾಂಕ ನಿಗದಿಯಾದ ಮೇಲೆ ಈ ಕ್ರಮ ಕೈಗೊಂಡಿರುವುದು..ಹಾಗೂ, ವಿಶೇಷ ತಂಡ ರಚಿಸಿ ಬಂಧಿಸಲು ಹೊರಟಿರುವುದು ಹೇಯ ಹಾಗೂ ಖಂಡನೀಯ ಎಂದು ಕುಟುಕಿದರು.
ಆದ್ಯತಾ ಪಟ್ಟಿಯನ್ನಿಟ್ಟುಕೊಂಡು ಕೆಲಸ ಮಾಡಬೇಕಾದ ಪೊಲೀಸರು, ನಿರ್ಜೀವ ಪ್ರಕರಣಕ್ಕೆ ವಿಶೇಷ ತಂಡ ರಚಿಸಿರುವುದು ಹಾಸ್ಯಾಸ್ಪದವಾಗಿದೆ. ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಮಟ್ಟ ಹಾಕಬೇಕಾದ ಪೊಲೀಸರು ರಾಮ ಭಕ್ತರ ಮೇಲೆ ತಮ್ಮ ಲಾಠಿ ಪ್ರಹಾರ ಮಾಡುವುದು ರಾಮ ಭಕ್ತರಿಗೆ ಮಾಡುವ ಅವಮಾನ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.