ಬಸ್ ಗಳ ನಡುವೆ ಭೀಕರ ಅಪಘಾತ, ಇಬ್ಬರು ಮಹಿಳೆಯರು ಮೃತ್ಯು, ಹಲವರ ಸ್ಥಿತಿ ಗಂಭೀರ
ಬಸ್ ಗಳ ನಡುವೆ ಭೀಕರ ಅಪಘಾತ, ಇಬ್ಬರು ಮಹಿಳೆಯರು ಮೃತ್ಯು, ಹಲವರ ಸ್ಥಿತಿ ಗಂಭೀರ
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ
ವಿಜಯಪುರ: ವಿಜಯಪುರದ ಕಲಬುರಗಿ ಹೆದ್ದಾರಿಯಲ್ಲಿ ಎರಡು ಬಸ್ ಗಳ ಮಧ್ಯೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಲಬುರಗಿ ಹಾಗೂ ವಿಜಯಪುರ ಕಡೆಗಳಿಂದ ಬರುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಎರಡೂ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ.
ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಮೃತರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಡೋಣೂರು ಗ್ರಾಮದ ಸಾಜೀದಾ ಬೇಗಂ ಮಕಾನದಾರ್ ( 36) ಹಾಗೂ ಕಲಬುರಗಿ ಪಟ್ಟಣದ ರೋಹಿಣಿ ಪಂಚಾಳ (31) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಎರಡೂ ಬಸ್ ಚಾಲಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿಜಯಪುರ ಜಿಲ್ಲಾ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾತಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಎಎಸ್ಪಿ ಶಂಕರ ಮಾರಿಹಾಳ, ವಿಜಯಪುರ ಗ್ರಾಮೀಣ ವೃತ್ತದ ಸಿಪಿಐ ರಾಯಗೊಂಡ ಜನಾರ ಸಿಬ್ಬಂದಿ ನೆರವಿನೊಂದಿಗೆ ಗಾಯಗಳನ್ನು ಆಸ್ಪತ್ರೆಗೆ ದಾಖಲಿಸಲು ಹಾಗೂ ಸಂಚಾರ ವ್ಯವಸ್ಥೆ ಸುಧಾರಿಸುವಲ್ಲಿ ನಿರತರಾಗಿದ್ದಾರೆ. ಅಪಘಾತಕ್ಕೀಡಾದ ಬಸ್ ಗಳನ್ನು ನೆರವಿಗಾಗಿ ಪೊಲೀಸರು ಸ್ಥಳಕ್ಕೆ ಕ್ರೇನ್ – ಜೆಸಿಬಿ ಕರೆಸಲು ಮುಂದಾಗಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.