ವಿಜಯಪುರ ಮಹಾನಗರ ಪಾಲಿಕೆ ‘ಕೈ ವಶಕ್ಕೆ,!!ಯತ್ನಾಳ್ ಗೆ ಮುಖಭಂಗ
ಸಚಿವ ಎಂ.ಬಿ.ಪಾಟೀಲ ಅವರ ರಾಜಕೀಯ ಚತುರತೆಯಿಂದ ಕೈಗೆ ಗೆಲವು
ವಿಜಯಪುರ ಮಹಾನಗರ ಪಾಲಿಕೆ ‘ಕೈ ವಶಕ್ಕೆ,!!ಯತ್ನಾಳ್ ಗೆ ಮುಖಭಂಗ
ಸಚಿವ ಎಂ.ಬಿ.ಪಾಟೀಲ ಅವರ ರಾಜಕೀಯ ಚತುರತೆಯಿಂದ ಕೈಗೆ ಗೆಲವು
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ
ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಜೆಪಿ ಚುನಾವಣಾಧಿಕಾರಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣೆ ಸಭೆಯಿಂದ ಹೊರ ನಡೆದ ಘಟನೆ ಜರುಗಿತು.
ಜ.9 ರಂದು ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು 2023 ಡಿಸೆಂಬರ್ 28 ರಂದು ಅಧಿಸೂಚನೆ ಹೊರಡಿಸಿದ್ದರು. ಪರಿಣಾಮ ಮಂಗಳವಾರ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಚುನಾವಣೆ ಪ್ರಕ್ರಿಯೆ ನಡೆಸಿದರು.
ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 35 ಸದಸ್ಯರಲ್ಲಿ ಪಂಗಡದ ಏಕೈಕ ಸದಸ್ಯ ಕಾಂಗ್ರೆಸ್ನ ದಿನೇಶ ಹಳ್ಳಿ ಉಮೇದುವಾರಿಕೆ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ. 34 ರ ಸದಸ್ಯೆ ಮೆಹಜಬಿನ್ ಹೊರ್ತಿ ಹಾಗೂ ಬಿಜೆಪಿ ಪಕ್ಷದಿಂದ ವಾರ್ಡ್ ನಂ.12 ರಿಂದ ಗೆದ್ದಿರುವ ರಶ್ಮಿ ಕೋರಿ ಉಮೇದುವಾರಿಕೆ ಸಲ್ಲಿಸಿದ್ದರು.
ಬಿಜೆಪಿ ಸದಸ್ಯರು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಲೇ ಮೇಯರ್-ಉಪ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರ ನಡೆದರು. ಸಭೆ ಬಹಿಷ್ಕರಿಸಿ ಹೊರ ಬಂದ ಬಿಜೆಪಿ ಸದಸ್ಯರಲ್ಲಿ ಕೆಲವರು ಚುನಾವಣಾಧಿಕಾರಿಕಾರಿ ವಿರುದ್ಧ ಧಿಕ್ಕಾರ ಕೂಗುವ ಜತೆಗೆ ಕಪ್ಪು ಪಟ್ಟಿಯನ್ನೂ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯಲ್ಲಿ ಬಿಜೆಪಿ 17 ಸದಸ್ಯರ ಬಲ ಹೊಂದಿದ್ದರೂ ಓರ್ವ ಸದಸ್ಯರ ನಿಧನದಿಂದ 16ಕ್ಕೆ ಇಳಿದಿದ್ದು, ಶಾಸಕ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರ ಮತಗಳು ಸೇರಿದಂತೆ 18 ಮತಗಳನ್ನು ಮಾತ್ರ ಹೊಂದಿತ್ತು.ಪಾಲಿಕೆಯ 10 ಸದಸ್ಯರು, ಇಬ್ಬರು ಎಮ್ಮೆಲ್ಸಿ, ಇಬ್ಬರು ಎಂಎಲ್ಎ ಹೊಂದಿದ್ದ ಕಾಂಗ್ರೆಸ್ 14 ಮತಗಳನ್ನು ಹೊಂದಿದ್ದರೂ ಐವರು ಪಕ್ಷೇತರರು, ಎಂಐಎಂ ಪಕ್ಷದ ಇಬ್ಬರು ಹಾಗೂ ಓರ್ವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಚುನಾವಣೆ ಫಲಿತಾಂಶದ ಕುರಿತು ಪ್ರಕಟಣೆ ಮಹಾನಗರ ಪಾಲಿಕೆ ಆಯುಕ್ತರು, ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ-ಉಪ ಮಹಾಪೌರ ಚುನಾವಣೆಯಲ್ಲಿ 41 ಸದಸ್ಯರಲ್ಲಿ 40 ಸದಸ್ಯರು ಮಾತ್ರ ಸಭೆಗೆ ಹಾರಾಗಿದ್ದರು. ಇದರಲ್ಲಿ 22 ಸದಸ್ಯರು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೇಹಜಬಿನ್ ಹೋರ್ತಿ ಪರ ಮತ ಚಲಾಯಿಸಿದ್ದು, ಇವರೊಬ್ಬರೇ ಹೆಚ್ಚು ಮತಗಳನ್ನು ಪಡದಿರುವ ಕಾರಣ ಮಹಾಪೌರರೆಂದು ಘೋಷಿಸಲಾಗಿದೆ.
ಉಪ ಮಹಾಪೌರ ಸ್ಥಾನಕ್ಕೆ ಎಸ್.ದಿನೇಶ ಸೋಮನಿಂಗಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಲೇ ಪಕ್ಷೇತರರು ಹಾಗೂ ಇತರೆ ಪಕ್ಷಗಳ ಪಾಲಿಕೆ ಸದಸ್ಯರು ಬೆಂಗಳೂರಿಗೆ ತೆರಳಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಇದೀಗ ನಿರೀಕ್ಷೆಯಂತೆ ಸಚಿವ ಎಂ.ಬಿ.ಪಾಟೀಲ ಅವರ ರಾಜಕೀಯ ಚತುರತೆಯಿಂದ ಕಾಂಗ್ರೆಸ್ ವಿಜಯಪುರ ಪಾಲಿಕೆಯಲ್ಲಿ ಅಧಿಕಾರ ಹಿಡಿಯವಲ್ಲಿ ಯಶಸ್ವಿಯಾಗಿದೆ. ಪಕ್ಷೇತರರ ಮನವೊಲಿಸಿ ಮೇಯರ್ ಸ್ಥಾನ ಪಡೆಯುವ ಅಕವಾಶವಿದ್ದರೂ ಬಿಜೆಪಿ ಹಾಗೂ ಯತ್ನಾಳ ಪಡೆ ವಿಫಲವಾಗಿದ್ದು, ತೀವ್ರ ಮುಖಭಂಗ ಅನುಭವಿಸಿದೆ.
ಚುನಾವಣಾಧಿಕಾರಿಯಾದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದು, ನಮ್ಮ ಆಕ್ಷೇಪವನ್ನು ಕಡೆಗಣಿಸಿ ಚುನಾವಣೆ ನಡೆಸಿದ್ದಾರೆ ಎಂದು ಸಭೆಯಿಂದ ಹೊರ ಬಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಅಗತ್ಯ ಸಂಖ್ಯಾ ಬೊಲವೇ ಇಲ್ಲದೇ ಸೋಲು ಭೀತಿಯಲ್ಲಿದ್ದ ಬಿಜೆಪಿ ಪೂರ್ವ ನಿಯೋಜನೆಯಂತೆ ಚುನಾವಣೆ ಸಭೆಯಿಂದ ಹೊರನಡೆದಿದೆ. ಬಿಜೆಪಿ ಸದಸ್ಯರೊಬ್ಬರು ನಿನ್ನೆಯೇ ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದರು ಎಂದು ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದರು.
ಮೇಯರ್-ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾನದ ಅರ್ಹತೆ ಹೊಂದಿದ್ದ ಸಚಿವ ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಕಟಕಧೋಂಡ, ಪ್ರಕಾಶ ರಾಠೋಡ, ಸುನಿಲಗೌಡ ಪಾಟೀಲ ಚುನಾವಣ ಸಭೆಯಲ್ಲಿ ಪಾಲ್ಗೊಂಡಿದ್ದರು.
35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆಗೆ 2022 ಅಕ್ಟೋಬರ್ ತಿಂಗಳಲ್ಲೇ ಚುನಾವಣೆ ನಡೆದಿದ್ದರೂ, ಮೀಸಲಾತಿ ವಿಷಯವಾಗಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಮೇಯರ್-ಉಪ ಮೇಯರ್ ಚುನಾವಣೆ ನಡೆದಿರಲಿಲ್ಲ.