420 Fake Doctor : ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್; ಕ್ಷಣ ಮಾತ್ರದಲ್ಲಿ ಸಾವಿಗಿಡಾದ ವೃದ್ಧ
ರಾಜ್ಯದಲ್ಲಿ ನಕಲಿ ವೈಧ್ಯರ ಹಾವಳಿ..!
ತುಮಕೂರು: ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವಿಗೀಡಾಗಿದ್ದ ಘಟನೆ ಮಾಸುವ ಮುನ್ನವೇ ಪಾವಗಡದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ನಕಲಿ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್‌ನಿಂದ ರೋಗಿಯೊಬ್ಬರು (Fake Doctor) ಮೃತಪಟ್ಟಿದ್ದಾರೆ. ಪಾವಗಡ ತಾಲೂಕಿನ ಕೊತ್ತೂರು ಮೂಲದ ಕೋಟೆ ಚಿತ್ತಯ್ಯ (58) ಮೃತ ದುರ್ದೈವಿ.
ಅಮಾಯಕ ವೃದ್ಧನನ್ನು ನಕಲಿ ವೈದ್ಯ ಮಾರುತಿ ಎಂಬಾತ ಬಲಿ ತೆಗೆದುಕೊಂಡಿದ್ದಾನೆ. ತುಮಕೂರಿನ ಪಾವಗಡ ತಾಲೂಕು ಕಿಲಾರ್ಲಹಳ್ಳಿ ಗ್ರಾಮದಲ್ಲಿ ಮಾರುತಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಇದರ ಅರಿವು ಇರದ ಕೋಟೆ ಚಿತ್ತಯ್ಯ, ಅನಾರೋಗ್ಯವೆಂದು ಮಾರುತಿ ಬಳಿ ಹೋಗಿದ್ದಾರೆ. ಆದರೆ ಎಡವಟ್ಟು ಡಾಕ್ಟರ್ ಕೊಟ್ಟ ಇಂಜೆಕ್ಷನ್‌ಗೆ ಕ್ಷಣ ಮಾತ್ರದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಕುಟುಂಬಸ್ಥರು ವೈದ್ಯನ ವಿರುದ್ಧ ದೂರು ನೀಡಿದ್ದಾರೆ.
ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದೆ. ಅಸಲಿ ಯಾರು ನಕಲಿ ವೈದ್ಯರು ಯಾರು ಎಂಬುದು ತಿಳಿಯದೇ ಅಮಾಯಕರು ದಿನೇದಿನೆ ನಕಲಿ ವೈದ್ಯರಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ನಕಲಿ ವೈದ್ಯರ ರಕ್ಷಣೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಿಂತಿದ್ದರಾ ಎಂಬ ಅನುಮಾನ ಮೂಡಿಸುತ್ತಿದೆ. ನಕಲಿ ವೈದ್ಯರು ರಾಜಾರೋಷವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರೂ ಕ್ರಮವಹಿಸಿದೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ವರದಿ: ಮೇಘನಾ ಕೆಂಗೇರಿ ತುಮಕೂರು