28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್‌ಗೆ ಸಚಿವ ಎಂ.ಬಿ. ಪಾಟೀಲ್ ಚಾಲನೆ
ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿಗೆ ಸಿಎಂ ಜತೆ ಚರ್ಚೆ,! ಸಚಿವ ಎಂ.ಬಿ.ಪಾಟೀಲ
28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್‌ಗೆ ಸಚಿವ ಎಂ.ಬಿ. ಪಾಟೀಲ್ ಚಾಲನೆ
ವಿಜಯಪುರದಲ್ಲಿ ಸೈಕ್ಲಿಂಗ್ ಅಕಾಡೆಮಿಗೆ ಸಿಎಂ ಜತೆ ಚರ್ಚೆ,! ಸಚಿವ ಎಂ.ಬಿ.ಪಾಟೀಲ
ವರದಿ:ಲಾಲಸಾಬ ಸವಾರಗೋಳ
ವಿಜಯಪುರ: ನಗರದಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದರು.
ನಗರದಲ್ಲಿ ಮಂಗಳವಾರ ಆರಂಭವಾದ ನಾಲ್ಕು ದಿನಗಳ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್ 2023-24 ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಂ ಕಾಮಗಾರಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಅದಕ್ಕೆ ಅಗತ್ಯವಾಗಿರುವ ಹೆಚ್ಚಿನ ಅನುದಾನವನ್ನು ಸರಕಾರ ನೀಡಲಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಬೇಕಿರುವ ಅತ್ಯುತ್ತಮ ಹವಾಮಾನ ಮತ್ತು ಪೂರಕ ವಾತಾರವಣವಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟಗಳು ರೋಡ್ ಸೈಕ್ಲಿಂಗ್ ನಲ್ಲಿ ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ.
ಇಲ್ಲಿ ಸೈಕ್ಲಿಂಗ್ ಅಕ್ಯಾಡೆಮಿ ಸ್ಥಾಪನೆಯಿಂದ ರೋಡ್ ಸೈಕ್ಲಿಂಗ್, ವೆಲೋಡ್ರಂ ಸೈಕ್ಲಿಂಗ್ ಮತ್ತು ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧಿಗಳಿಗೂ ಅನುಕೂಲವಾಗಲಿದೆ. ಈ ಅಕ್ಯಾಡೆಮಿ ಸ್ಥಾಪನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ಸೈಕ್ಪಿಷ್ಟ್ ಗಳಿಗೆ ಸಿಗಲಿವೆ. ಅಲ್ಲದೇ, ಸ್ಥಳೀಯ ಬಡ ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಇದಕ್ಕಾಗಿ ಇಲಾಖೆಯ ಸಿಎಸ್ಆರ್(CSR) ಫಂಡ್ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯಿಂದಲೂ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.
ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರುವ ಓರ್ವ ಕ್ರೀಡಾಪಟು ಮತ್ತು ತಂಡ ಗೆಲ್ಲಬಹುದು. ಆದರೆ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯವಾಗಿದೆ ದೇಶದ ನಾನಾ ರಾಜ್ಯಗಳಿಂದ ಇಲ್ಲಿಗೆ ಬಂದಿರುವ ಕ್ರೀಡಾಪಟುಗಳು ಇಲ್ಲಿನ ಗೋಳಗುಮ್ಮಟ, ಕಪ್ಪು ತಾಜಮಹಲ್ ಎಂದೇ ಹೆಸರಾಗಿರುವ ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ಇತರ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಸುಂದರ ನೆನಪುಗಳೊಂದಿಗೆ ನಿಮ್ಮೂರಿಗೆ ಮರಳಿರಿ ಎಂದು ಎಂ. ಬಿ. ಪಾಟೀಲ ಹೇಳಿದರು.
ಸೈಕ್ಲಿಂಗ್ ಸಂಸ್ಥೆಯ ರಾಜ್ಯಾಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಮತ್ತಿತರರು ಸೈಕ್ಲಿಂಗ್ ಕ್ರೀಡೆಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಈವರೆಗೆ ನಡೆದ ಒಟ್ಟು 28 ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಕ್ರೀಡಾಕೂಟಗಳಲ್ಲಿ ವಿಜಯಪುರ ಜಿಲ್ಲೆಯ ಸೈಕ್ಲಿಷ್ಟ್ ಗಳು 13 ಬಾರಿ ಜನರಲ್ ಚಾಂಪಿಯನ್ನಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮಣಿಂದರಪಾಲಸಿಂಗ್, ಶಾಸಕ ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ, ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಕುರಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಚಿವರು ನಾನಾ ರಾಜ್ಯಗಳಿಂದ ಆಗಮಿಸಿದ ಸೈಕ್ಲಿಷ್ಟಗಳ ಜೊತೆ ಸೈಕ್ಲಿಂಗ್ ವಿಷಯಗಳ ಕುರಿತು ಮಾಹಿತಿ ಪಡೆದರು.