Local News

ವಿಜಯಪುರ ಮೂಲದ ನವೀನ್ ಅಮೆರಿಕಾದ ಕೌನ್ಸಿಲರ್

WhatsApp Group Join Now
Telegram Group Join Now

ವಿಜಯಪುರ ಮೂಲದ ನವೀನ್ ಅಮೆರಿಕಾದ ಕೌನ್ಸಿಲರ್

ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ

ವಿಜಯಪುರ: ವಿಜಯಪುರ ಮೂಲದ ನವೀನ್ ಹಾವಣ್ಣನವರ ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ರೋಚಸ್ಟರ್ ಜಿಲ್ಲೆಯ ಪಿಟ್ಸ್ ಫೋರ್ಡ್ ನಗರಕ್ಕೆ ನಡೆದ ಕೌನ್ಸಿಲರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ.

ವಿಜಯಪುರದಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿರುವ ಅವರು, ಹಾಸನದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ, ಕಲಬುರ್ಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಹಾಗೂ ಬೆಂಗಳೂರಿನ ಆರ್‌ಐ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.

ನವೀನ್‌ ಅವರು ಕೌನ್ಸಿಲರ್‌ ಆಗಿರುವ ಹಿನ್ನೆಲೆಯಲ್ಲಿ, ವಿಜಯಪುರ ನಗರದ ಟ್ರಝರಿ ಕಾಲೊನಿಯಲ್ಲಿ ವಾಸವಾಗಿರುವ ತಂದೆ ಪರಪ್ಪ ಹಾವಣ್ಣವರ, ತಾಯಿ ರೇಣುಕಾ ಹಾಗೂ ಕುಟುಂಬದವರಲ್ಲಿ ಸಂತಸ, ಸಂಭ್ರಮ ಮನೆ ಮಾಡಿದೆ.

ಭಾರತೀಯ ವಾಯು ಪಡೆಯಲ್ಲಿ ಸಾರ್ಜೆಂಟ್‌ ಆಗಿ ನಿವೃತ್ತರಾದ ಬಳಿಕ ರೇಷ್ಮೆ ಇಲಾಖೆಯಲ್ಲೂ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಪರಪ್ಪ ಹಾವಣ್ಣವರ ಅವರು, ತಮ್ಮ ಪುತ್ರ ಕೌನ್ಸಿಲರ್‌ ಆಗಿ ಆಯ್ಕೆಯಾಗಿರುವ ಕುರಿತು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ಹಿರಿಯರ ಆಶೀರ್ವಾದ, ದೇವರ ಕೃಪೆಯಿಂದ ಇದು ಸಾಧ್ಯವಾಗಿದೆ. ಇಂಡಿಯನ್‌ ಕಮ್ಯುನಿಟಿ ಸೆಂಟರ್‌ ಅಧ್ಯಕ್ಷನಾಗಿ ನವೀನ್‌ ಅಮೇರಿಕಾದಲ್ಲಿ ಹತ್ತು ಹಲವು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾನೆ. ಹೀಗಾಗಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ಸ್ಥಳೀಯರ ಬೆಂಬಲ ಅವನಿಗೆ ಹೆಚ್ಚಿತ್ತು. ಇದುವೇ ಆತನ ಗೆಲುವಿಗೆ ನೆರವಾಗಿದೆ‘ ಎಂದರು.

‘ಅಮೆರಿಕಾದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಸೀನಿಯರ್‌ ಮ್ಯಾನೇಜರ್‌ ಆಗಿಯೂ ಕಾರ್ಯನಿರ್ವಹಿಸುತ್ತಿರುವ ಪುತ್ರ ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಕುಟುಂಬದೊಂದಿಗೆ ವಿಜಯಪುರಕ್ಕೆ ಬಂದು ಹೋಗಿದ್ದರು. ನಾವು ಆಗಾಗ ಪುತ್ರನ ಬಳಿಗೆ ಹೋಗಿ ಬರುತ್ತಿರುತ್ತೇವೆ’ ಎಂದರು.

WhatsApp Group Join Now
Telegram Group Join Now
Back to top button
error: Content is protected !!